ಮಂಗಳೂರ ಸಮಾಚಾರ
	ಕನ್ನಡದ ಪ್ರಥಮ ಪತ್ರಿಕೆ. 1843 ಜುಲೈ 1 ರಿಂದ ಪ್ರಕಟವಾಗತೊಡಗಿತು. ಇದನ್ನು ಜರ್ಮನ್ ಇವ್ಯಾಂಜಲಿಕಲ್ ಮಿಶನ್‍ರವರು (ಬಾಸೆಲ್ ಮಿಶನ್) ಆರಂಭಿಸಿದರು. ಹರ್ಮನ್ ಮೋಗ್ಲಿಂಗ್ ಇದರ ಸಂಪಾದಕ. ಇದರಲ್ಲಿ ಕಲ್ಲಚ್ಚಿನ ನಾಲ್ಕು ಪುಟಗಳಿರುತ್ತಿದ್ದುವು. ಮೊದಲ ದಿನ ಮತ್ತು 15 ನೆಯ ದಿನ ಪ್ರಕಟವಾಗುತ್ತಿತ್ತು. ಇಂದಿನ ಪತ್ರಿಕಾಧರ್ಮದ ಅನೇಕ ಆಧುನಿಕ ಅಂಶಗಳನ್ನು ಮಂಗಳೂರ ಸಮಾಚಾರ ಅನುಸರಿಸಿತ್ತು. ಮುಂದೆ ಇದು ಬಳ್ಳಾರಿಗೆ ವರ್ಗವಾಗಿ ಅಲ್ಲಿ ಕಂನಡ ಸಮಾಚಾರ ಎಂಬ ಹೆಸರಿನಿಂದ 1844 ಮಾರ್ಚ್ 1ನೆಯ ದಿನಾಂಕದಿಂದ ಪ್ರಕಟವಾಗುತ್ತಿದ್ದು ವರ್ಷದ ಕೊನೆಯಲ್ಲಿ ಪ್ರಕಟಣೆ ನಿಂತಿತೆಂದು ತಿಳಿದುಬರುತ್ತದೆ. ಕರ್ನಾಟಕದಲ್ಲಿ ಪ್ರತಿವರ್ಷ ಜುಲೈ 1 ರಂದು “ಪತ್ರಿಕಾ ದಿನ”ವನ್ನಾಗಿ ಆಚರಿಸಲಾಗುತ್ತದೆ. 
(ನೋಡಿ- ಕಂನಡ-ಸಮಾಚಾರ)								
(ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ